ವಿಜಯಾದಿತ್ಯ
	ಬಾದಾಮಿ ಚಳುಕ್ಯ ವಂಶದ ರಾಜ (696-733). ವಿನಯಾದಿತ್ಯನ ಮಗ. ವಿನಯಾದಿತ್ಯ ತನ್ನ ತಂದೆ ಮತ್ತು ತಾತ ಇವರ ಕಾಲದಲ್ಲಿ ರಾಜ್ಯದ ಆಡಳಿತದಲ್ಲೂ ಅನೇಕ ಯುದ್ಧಗಳಲ್ಲೂ ಭಾಗವಹಿಸಿದ್ದ. ಇವನು ತನ್ನ ತಂದೆಯ ಕಾಲದಲ್ಲಿ ಉತ್ತರ ಭಾರತದಲ್ಲಿ ಯುದ್ಧ ಮಾಡಿ ಗಂಗಾ, ಯಮುನಾ ಪ್ರತಿಮೆಗಳನ್ನೂ ಢಕ್ಕ ಮತ್ತು ಪಾಳಿ ಧ್ವಜವನ್ನೂ ಶತ್ರುಗಳಿಂದ ವಶಪಡಿಸಿಕೊಂಡನೆಂದು ಕೆಲವು ಶಾಸನಗಳು ತಿಳಿಸುತ್ತವೆ. ಈತ ಉತ್ತರ ಭಾರತದಲ್ಲಿ ವಜ್ರಟ ಎಂಬವನ ಮೇಲೆ ಅಥವಾ ಯಶೋವರ್ಮ ಎಂಬವನ ಮೇಲೆ ಸೆಣಸಿರಬಹುದು. ಯಾವುದೋ ಸಂದರ್ಭದಲ್ಲಿ ಈತನನ್ನು ಶತ್ರುಗಳು ಸೆರೆಹಿಡಿದಿದ್ದರೆಂದೂ ಅಲ್ಲಿಂದ ತಾನೇ ತಪ್ಪಿಸಿಕೊಂಡನೆಂದೂ ಕೆಲವು ಶಾಸನ ಹೇಳಿಕೆಗಳಿವೆ. ಇವನ ಆಳಿಕೆಯ ಕಾಲದಲ್ಲಿ ಯುವರಾಜ ಇಮ್ಮಡಿ ವಿಕ್ರಮಾದಿತ್ಯ ಕಾಂಚಿಯ ಮೇಲೆ ದಾಳಿ ಮಾಡಿ, ಅಲ್ಲಿಯ ರಾಜನಾದ ಇಮ್ಮಡಿ ಪರಮೇಶ್ವರವರ್ಮನನ್ನು ಜಯಿಸಿ ಅವನಿಂದ ಕಪ್ಪಕಾಣಿಕೆಗಳನ್ನು ವಸೂಲಿ ಮಾಡಿದನೆಂದು ಉಳ್ವಾಲ (ಕರ್ನೂಲು ಜಿಲ್ಲೆ) ಶಾಸನದಿಂದ ತಿಳಿದುಬರುತ್ತದೆ.

	ಬಾದಾಮಿ ಚಳುಕ್ಯರ ರಾಜರುಗಳ ಪೈಕಿ ಇವನ ಆಳಿಕೆಯ ಕಾಲ ಅತಿ ದೀರ್ಘವಾದುದೂ ಶಾಂತಿ ಮತ್ತು ಸುಭಿಕ್ಷೆಯಿಂದ ಕೂಡಿದ್ದೂ ಆಗಿತ್ತು. ವಿಜಯಾದಿತ್ಯ ತನ್ನ ತಂದೆ ವಿನಯಾದಿತ್ಯನ ರೀತಿಯಲ್ಲೇ ಆಡಳಿತದ ಸುವ್ಯವಸ್ಥೆಗಾಗಿ ರಾಜ್ಯದಲ್ಲಿ ಆಗಿಂದಾಗ್ಗೆ ಸಂಚರಿಸುತ್ತಿದ್ದ ನೆಂದೂ ಹಾಗೂ ತನ್ನ ಆಳಿಕೆಯ ಕಾಲದಲ್ಲಿ ಏಲಾಪುರ, ಹತಂಪುರ, ರಕ್ತಪುರ ಹೀಗೆ ಅನೇಕ ಕಡೆ ಬೀಡು ಬಿಟ್ಟಿದ್ದನೆಂದು ಶಾಸನಗಳಿಂದ ತಿಳಿಯುತ್ತದೆ. ಬಾಣರು, ರೇನಾಡುವಿನ ತೆಲುಗು ಚೋಡರು, ಭೂಪಾದಿತ್ಯ, ಉಪೇಂದ್ರ ಮುಂತಾದ ರಾಜರು ಇವನ ಸಾಮಂತರಾಗಿದ್ದರು.

	ವಿಜಯಾದಿತ್ಯನ ಕಾಲ ದೇವಾಲಯ ನಿರ್ಮಾಣಕ್ಕೂ ಪ್ರಸಿದ್ಧವಾಗಿದೆ. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ ಎಂಬ ಈಶ್ವರ ದೇವಸ್ಥಾನವನ್ನು (ಈಗಿನ ಸಂಗಮೇಶ್ವರ ದೇವಾಲಯ) ಕಟ್ಟಿಸಿದ. ವಿಜಯಾದಿತ್ಯ ಜೈನಧರ್ಮಕ್ಕೂ ತನ್ನ ಗೌರವಾದರವನ್ನು ತೋರಿಸಿ ಅನೇಕ ಜೈನಗುರುಗಳಿಗೆ ದತ್ತಿಗಳನ್ನು ನೀಡಿದ. ಇವನ ಸಹೋದರಿ, ಆಳುಪ ಚಿತ್ರವಾಹನನ ಹೆಂಡತಿ ಕುಂಕುಮ ಮಹಾದೇವಿ ಜೈನಧರ್ಮದಲ್ಲಿ ಅಪಾರ ನಿಷ್ಠೆಯನ್ನು ಹೊಂದಿದ್ದಳು. ಈಕೆ ಲಕ್ಷ್ಮೇಶ್ವರದಲ್ಲಿ ಒಂದು ಜೈನ ದೇವಸ್ಥಾನವನ್ನು ಕಟ್ಟಿಸಿದಳು. ವಿಜಯಾದಿತ್ಯ 733ರಲ್ಲಿ ನಿಧನನಾದ.										
(ಎಸ್.ಐ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ